


ತೋಂಟದಾರ್ಯ ಇಂಜಿನೀಯರಿ೦ಗ ಕಾಲೇಜ ಆವರಣದಲ್ಲಿ ಹೊಸಬರಿಗೆ ಜೋಶ್ ತುಂಬಿದ ಆರಂಭ
ಗದಗ ೧೯: "ನವ ಯುಗದ ನಿರ್ಮಾಣಕಾರರೇ ಸ್ವಾಗತ, ನಿಮ್ಮ ಕನಸುಗಳನ್ನೇ ಹೆಬ್ಬಾಗಿಲು ಮಾಡಿ, ಸುಭದ್ರ ಭವಿಷ್ಯಕ್ಕೆ ಅಡಿಪಾಯ ಹಾಕಿ" ಎಂಬ ಸಂದೇಶದೊ೦ದಿಗೆ ಇಂದು ಗದಗದ ತೋಂಟದಾರ್ಯ ಇಂಜಿನೀಯರಿ೦ಗ ಕಾಲೇಜ ಆವರಣದಲ್ಲಿ ೨೦೨೩-೨೪ನೇ ಸಾಲಿನ ಹೊಸಬರಿಗೆ ವಿಜೃಂಭಣೆಯ ಸ್ವಾಗತ ಕಾರ್ಯಕ್ರಮ ನಡೆಯಿತು.
ವರ್ಣರಂಜಿತ ರಂಗವಲ್ಲಿಯ ಸೊಬಗು, ಸಾಂಪ್ರದಾಯಿಕವಾಗಿ ಸಸಿಗೆ ನೀರು ಉಣಿಸಿ ಉದ್ಘಾಟನೆಗೊಂಡ ಕಾರ್ಯಕ್ರಮದಲ್ಲಿ ಹೊಸ ವಿದ್ಯಾರ್ಥಿಗಳಿಗೆ ಗೌರವದಿಂದ ಪ್ರವೇಶ ನೀಡಲಾಯಿತು. ಹಿರಿಯ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಶುಭ ಕಾಮನೆಗಳೊಂದಿಗೆ ನವ ಯುಗದ ಶಿಲ್ಪಿಗಳನ್ನು ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಿನ್ಸಿಪಾಲ ಡಾ. ಎಂ. ಎಂ. ಅವಟಿ ಅವರು ಮಾತನಾಡಿ, "ಇಂಜಿನೀಯರಿ೦ಗ ಕಲೆಯು ಕೇವಲ ಪಠ್ಯಪುಸ್ತಕಗಳಿಗೆ ಸೀಮಿತವಾಗಿರುವುದಿಲ್ಲ. ಇದು ನಿರಂತರ ಕಲಿಕೆ, ಸೃಜನಶೀಲತೆ, ಸಮಸ್ಯೆಗಳನ್ನು ಪರಿಹರಿಸುವ ಚತುರತೆ, ಮತ್ತು ಹೊಸತನವನ್ನು ಸ್ವಾಗತಿಸುವ ಮನೋಭಾವದ ಸಂಗಮ. ಹೆಚ್ಚು ಕನಸುಗಳನ್ನು ಕಾಣಿ, ಅವನ್ನು ಪೋಷಿಸಿ ಮತ್ತು ಬೆಳೆಗಿಸಿ, ಭವಿಷ್ಯದ ಭವ್ಯ ನಿರ್ಮಾಣಕ್ಕೆ ನಾಂದಿ ಹಾಡಿ" ಎಂದು ಪ್ರೇರೇಪಿಸಿದರು. ವಿಶೇಷ ಸಾಧಕರಿಗೆ ಪ್ರಶಸ್ತಿ ಪತ್ರಗಳನ್ನು ನೀಡಲಾಯಿತು.
ಈ ಸ್ವಾಗತ ಕಾರ್ಯಕ್ರಮ ‘ಪರಿಚಯ’, ಹೊಸಬರಿಗೆ ಕಾಲೇಜು ಜೀವನದ ಪರಿಚಯವನ್ನು ಮಾಡುವುದರ ಜೊತೆಗೆ, ಅವರಲ್ಲಿ ಉತ್ಸಾಹ, ಸ್ಪೂರ್ತಿಯನ್ನು ತುಂಬಿ ತುಳುಕಿಸಲು ಸಹಕಾರಿ. ಈ ಯುವ ಪಡೆ ಭವಿಷ್ಯದ ಭಾರತದ ಭರವಸೆಯಾಗಿದೆ ಎಂದು ಎಲೆಕ್ಟ್ರಿಕಲ್ ಇಂಜಿನೀಯರಿ೦ಗ ವಿಭಾಗದ ಮುಖ್ಯಸ್ಥರಾದ ಡಾ. ಈರಣ್ಣ ಕೋರಚಗಾಂವ ತಿಳಿಸಿದರು.
ಹಿರಿಯ ವಿದ್ಯಾರ್ಥಿಗಳು ಸ್ವಾಗತಗೀತ ಹಾಡಿ, ನೃತ್ಯ ಪ್ರದರ್ಶನ ನೀಡಿ ಹೊಸಬರಿಗೆ ಸಂತಸದ ವಾತಾವರಣವನ್ನು ಸೃಷ್ಟಿಸಿದರು. ನಂತರ, ಹೊಸಬರು ತಮ್ಮ-ತಮ್ಮ ವೈಯಕ್ತಿಕ ಪರಿಚಯವನ್ನು ಮಾಡಿಕೊಂಡು, ತಮ್ಮ ಕನಸುಗಳನ್ನು ಹಂಚಿಕೊ೦ಡರು. ಸಂಪೂರ್ಣ ಕಾರ್ಯಕ್ರಮ ಹಿರಿಯ ವರ್ಗದ ವಿದ್ಯಾರ್ಥಿಗಳಿಂದ ಆಯೋಜನೆಗೊಂಡಿತ್ತು.
ಪ್ರೊ. ಎಸ್. ಎಸ್. ಕಂದಗಲ್ಲ, ಪ್ರೊ. ಮಲ್ಲಿಕಾರ್ಜುನ, ಪ್ರೊ. ಜಗದೀಶ ಶಿವನಗುತ್ತಿ, ಪ್ರೊ. ಸಂತೋಷಕುಮಾರ, ಪ್ರೊ. ಮೃತ್ಯುಂಜಯ ಹೂಗಾರ ಉಪಸ್ಥಿತರಿದ್ದರು.

Comments